ಭಾಲ್ಕಿ ಬಿದರೆ ಜಿಲ್ಲೆಯ ಒಂದು ತಾಲ್ಲೂಕು; ತಾಲ್ಲೂಕಿನ ಹಾಗೂ ಹೋಬಳಿಯ ಆಡಳಿತ ಕೇಂದ್ರ ಪಟ್ಟಣ, ಈ ತಾಲ್ಲೂಕಿನ ಉತ್ತರ ಮತ್ತು ವಾಯುವ್ಯದಲ್ಲಿ ಔರಾದ, ಪೂರ್ವದಲ್ಲಿ ಬಿದರೆ, ದಕ್ಷಿಣದಲ್ಲಿ ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲ್ಲೂಕುಗಳೂ ಪಶ್ಚಿಮದಲ್ಲಿ ಮಹಾರಾಷ್ಟ್ರ ರಾಜ್ಯವೂ ಇವೆ. ತಾಲ್ಲೂಕಿನಲ್ಲಿರುವ ಗ್ರಾಮಗಳ ಸಂಖ್ಯೆ 122. ಭಾಲ್ಕಿ, ಹಲಬರ್ಗಾ, ಖಟಕ್ ಚಿಂಚೋಳಿ, ಲಖನಗಾಂವ್, ನಿಟ್ಟೂರ್, ಸೈಗಾಂವ್ ಇವು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ 1,113,8 ಚಕಿಮೀ. ಜನಸಂಖ್ಯೆ 1,82,255,(1981).

ಮಾಂಜರಾ ಮತ್ತು ಕಾರಂಜಾ ಇವು ತಾಲ್ಲೂಕಿನ ಮುಖ್ಯ ನದಿಗಳು. ಮಾಂಜರಾ ನದಿ ತಾಲ್ಲೂಕಿನ ಪಶ್ಚಿಮ ಗಡಿಯಲ್ಲಿ ಸ್ವಲ್ಪ ದೂರ ಹರಿದು ಆಮೇಲೆ ತಾಲ್ಲೂಕಿನೊಳಗೆ ಈಶಾನ್ಯ ದಿಕ್ಕಿಗೆ ಹರಿದು ತಾಲ್ಲೂಕಿನ ಉತ್ತರ ಗಡಿಯಾಗಿ ಮುಂದುವರೆಯುತ್ತದೆ. ಮಂಜರಾ ನದಿಯ ಉಪನದಿ ಕಾರಂಜಾ. ಇದು ತಾಲ್ಲೂಕಿನ ಆಗ್ನೇಯದಿಂದ ವಾಯವ್ಯದ ಕಡೆಗೆ ಹರಿದು ಮಾಂಜರಾ ನದಿಯನ್ನು ಕೂಡಿಕೊಳ್ಳುತ್ತದೆ. ಕಾರಂಜಾದ ಉಪನದಿ ಚುಳಕಿ. ಇದು ಬಸವಕಲ್ಯಾಣದಿಂದ ಹರಿದು ಬಂದು ಕಾರಂಜಾವನ್ನು ಸೇರುತ್ತದೆ. ತಾಲ್ಲೂಕಿನಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ 919 ಮಿಮೀ.

ತಾಲ್ಲೂಕಿನಲ್ಲಿ ಮಣ್ಣಿನ ನೆಲವೇ ಹೆಚ್ಚು. ಅಲ್ಲಲ್ಲಿ ಕೆಂಪು, ಕಪ್ಪು ಮಣ್ಣಿನ ನೆಲವಿದೆ. ಅರಣ್ಯಾವೃತ ಪ್ರದೇಶದ ವಿಸ್ತೀರ್ಣ 817 ಹೆಕ್ಟೇರ್. ಹೆಚ್ಚಿನ ನೀರಾವರಿ ಸೌಲಭ್ಯವಿಲ್ಲ. ಬಾವಿಯಿಂದ ಸ್ವಲ್ಪಮಟ್ಟಿಗೆ ಈ ಸೌಲಭ್ಯ ಒದಗಿದೆ. ಕಾರಂಜಾ ನದಿ ಯೋಜನೆಯಿಂದ ಇಲ್ಲಿಯ ಭೂಮಿ ವ್ಯಾಪಕವಾಗಿ ನೀರಾವರಿ ಒಳಪಡುವ ನಿರೀಕ್ಷೆಯಿದೆ. ತಾಲ್ಲೂಕಿನ ಬೆಳೆಗಳು ಜೋಳ, ನೆಲಗಡಲೆ, ಕಡಲೆ, ತೊಗರಿ, ಬತ್ತ ಮತ್ತು ಹತ್ತಿ.

ಇಲ್ಲಿಯ ರಸ್ತೆಗಳ ಉದ್ದ 282 ಕಿಮೀ. ಬಿದರೆ-ಪರ್ಲಿ ರಸ್ತೆ ಮುಖ್ಯವಾದ್ದು. ಹೈದರಾಬಾದ್-ಬಿದರೆ-ಪರ್ಲಿ ರೈಲುಮಾರ್ಗ ಈ ತಾಲ್ಲೂಕಿನ ಮೂಲಕ ಹಾದು ಹೋಗುತ್ತದೆ.

ಆಡಳಿತ ಕೇಂದ್ರ ಪಟ್ಟಣ ಭಾಲ್ಕಿ. ಇದು ಬಿದರೆ ವಾಯುವ್ಯದಲ್ಲಿ 45 ಕಿಮೀ ದೂರದಲ್ಲಿದೆ. ಜನಸಂಖ್ಯೆ 18,827 (1981). ಶಾಸನಗಳಲ್ಲಿ ಇದನ್ನು ಭಲ್ಲುಂಕೆ, ಭಾಲಿಕಿ, ಭಾಲಿಕ್ಕಿ ಎಂದು ಹೆಸರಿಸಲಾಗಿದೆ. ಶಿವಶರಣ ಕುಂಬಾರ ಗುಂಡಯ್ಯ ಇಲ್ಲಿಯವನು. ರಾಮಚಂದ್ರ ಜಾಧವ್ ಎಂಬಾತ ಇಲ್ಲಿ ಒಂದು ಕೋಟೆ ಕಟ್ಟಿದ. ಇದು ಹೈದರಾಬಾದಿನ ನಿಜಾಮನ ವಶಕ್ಕೆ ಬಂದಾಗ ಅವನ ಅಧೀನದಲ್ಲಿ ಖುರ್ಷೀದ್ ಜಾಹ ಎಂಬಾತ ಈ ಸುತ್ತಿನ ಪ್ರದೇಶದ ಮುಖ್ಯನಾಗಿದ್ದ. ಅವನ ಪಾಯಿಗಾದ ಆಡಳಿತ ಕೇಂದ್ರ ಭಾಲ್ಕಿಯಾಗಿತ್ತು.

ಭಾರತದ 1857ರ ಬಂಡಾಯದ ಕಾಲದಲ್ಲಿ ಭಾಲ್ಕಿ ಪ್ರಮುಖ ಪಾತ್ರವಹಿಸಿತ್ತು. ನಾನಾಸಾಹೇಬ್ ಪೇಶ್ವೆಯ ಅಣ್ಣನ ಮಗ ರಾವ್‍ಸಾಹೇಬ್ ಪೇಶ್ವೆಯ ನೇತೃತ್ವದಲ್ಲಿ 1862ರಲ್ಲಿ ಅನೇಕರು ಗುಂಪುಗೂಡಿ ಬ್ರಿಟಿಷರನ್ನು ಹೊಡೆದೋಡಿಸಲು ಮುಂದಾದರು. ರಾವ್ ಸಾಹೇಬನ ಬೆಂಬಲಿಗರ ಪೈಕಿ ಒಬ್ಬನಾದ ರಾಮರಾವ್ ಅಥವಾ ಜಂಗ್ ಬಹಾದ್ದೂರ್ ಎಂಬಾತ ಅನೇಕ ಸಂಗಡಿಗರನ್ನು ಕೂಡಿಕೊಂಡು ಬಿದರೆ ಜಿಲ್ಲೆಯ ಅಷ್ಟ ಎಂಬಲ್ಲಿ ಭಗವಾ ಧ್ವಜವನ್ನು ಹಾರಿಸಿ ಅವನು ಅಲ್ಲಿ ನೆಡಿಸಿದ ಶಿಲಾಶಾಸನದಲ್ಲಿ ತಾನು ಸಾತಾರದ ಛತ್ರಪತಿಗಳ ಸಂಬಂಧಿಕನೆಂಬುದನ್ನು ನಮೂದಿಸಿದ್ದಾನೆ. ಅವನು ಆ ಸುತ್ತಿನ ಪಟೇಲರಿಗೆಲ್ಲ ಆಜ್ಞಾಪತ್ರಗಳನ್ನು ಕಳಿಸಿ ಅವರ ಸಹಕಾರವನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಸಂಗ್ರಾಮ ಸಾರಲು ಶಸ್ತ್ರ ಪಡೆಯನ್ನು ಸನ್ನದ್ಧಗೊಳಿಸಿದ. ಅಲ್ಲದೆ ತಾನು ಉತ್ತರದ ತಾತ್ಯಾಟೋಪಿಯ ರಾಯಭಾರಿಯೆಂದು ಪ್ರಚಾರ ಮಾಡಿದ. ಭೀಮ ರಾವ್, ಬಾಲಕೃಷ್ಣ ವಿಠೋಬ ಮೊದಲಾದ ಅನೇಕರು ಈತನ ಹಿಂದೆ ನಿಂತರು. ಬ್ರಿಟಿಷ್ ಸರ್ಕಾರ ಬಹಳ ಶ್ರಮಪಟ್ಟು ರಾವ್ ಸಾಹೇಬನನ್ನು ಆಗ್ರ್ರಾದ ಬಳಿ ಹಿಡಿದು ಗಲ್ಲಿಗೇರಿಸಿತು. ರಾಮರಾಯನನ್ನೂ ಅವನ ಜೊತೆಯವರನ್ನೂ ಭಾಲ್ಕಿಯ ಹತ್ತಿರ ಸೆರೆಹಿಡಿದು ಶಿಕ್ಷೆಗೆ ಗುರಿಪಡಿಸಲಾಯಿತು. ಇದು 1857-58ರ ಕ್ರಾಂತಿಯ ಕೊನೆಯ ಪ್ರತಿಧ್ವನಿಯಾಗಿತ್ತು. ಇದನ್ನು ಭಾಲ್ಕಿಯ ಕತೆಯೆಂದೂ ಭಾಲ್ಕಿಯ ಪಿತೂರಿಯೆಂದೂ ಕರೆಯಲಾಗಿದೆ.

ಭಾಲ್ಕಿಯಲ್ಲಿ ಭಾಲ್ಕೇಶ್ವರನ ದೇವಾಲಯವಿದೆ. ಇದರಲ್ಲಿ ಬಸವೇಶ್ವರ, ಬಲಮುರಿ ಗಣಪತಿ, ಕುಂಭೇಶ್ವರ ಮುಂತಾದ ಗುಡಿಗಳಿವೆ. ಬಲಮುರಿ ಗಣಪತಿ ಒಂದು ಅಪೂರ್ವ ವಿಗ್ರಹ.  ನಿಂತಿರುವ ಭಂಗಿಯಲ್ಲಿರುವ ಆ ಮೂರ್ತಿಯ ಸೊಂಡಿಲು ಬಲಗಡೆಗೆ ತಿರುಗಿಕೊಂಡಿದೆ. ಭಾಲ್ಕೇಶ್ವರನ ದೇವಾಲಯದ ಜಾತ್ರೆ ಪ್ರತಿವರ್ಷವೂ ಮಾರ್ಚ್-ಏಪ್ರಿಲ್ ಸಮಯದಲ್ಲಿ ನಡೆಯುತ್ತದೆ. ಭಾಲ್ಕಿಯಲ್ಲಿ ಕೆಲವು ಪ್ರಾಚೀನ ವೀರಶೈವ ಮಠಗಳಿವೆ. ಆಸ್ಪತ್ರೆ, ಪ್ರೌಢಶಾಲೆಗಳು, ಕಾಲೇಜು ಮತ್ತು ಪುರಸಭೆಯಿವೆ. ಇದೊಂದು ರೈಲ್ವೆನಿಲ್ದಾಣ.

ಭಾಲ್ಕಿ ತಾಲ್ಲೂಕಿನ ಕೆಲವು ಪ್ರಮುಖ ಸ್ಥಳಗಳ ಅಲ್ವಾಯಿ, ಭಾತಂಬ್ರ, ಬ್ಯಾಲಹಳ್ಳಿ, ಚಾಳಕಾಪುರ, ಖಾನಾಪುರ, ಖಟಕ ಚಿಂಚೋಳಿ, ಲಖನಗಾಂವ್ ಮತ್ತು ತೂಗಾಂವ್. ಆಲ್ವಾಯಿ ಭಾಲಿ ಪಟ್ಟಣದ ವಾಯವ್ಯಕ್ಕೆ 35 ಕಿಮೀ ದೂರದಲ್ಲಿದೆ. ಇಲ್ಲಿ ಲಕ್ಷ್ಮೀದೇವಿಯ ಚಿಕ್ಕ ದೇಗುಲವಿದೆ. ಪ್ರತಿ ಜನವರಿ ತಿಂಗಳಲ್ಲಿ ಇಲ್ಲಿ ಐದು ದಿವಸಗಳ ಕಾಲ ಜಾತ್ರೆ ನೆರೆಯುತ್ತದೆ. ಜನಸಂಖ್ಯೆ 2,428. ಭಾಲ್ಕಿಯ ವಾಯವ್ಯಕ್ಕೆ 8 ಕಿಮೀ ದೂರದಲ್ಲಿರುವ ಭಾತಂಬ್ರದಲ್ಲಿ ಹಳೆಯ ಕೋಟೆಯಿದೆ. ಇಲ್ಲಿಯ ವೀರಭದ್ರದೇವರ ಗುಡಿಯಲ್ಲಿ ಏಪ್ರಿಲ್-ಮೇ ಕಾಲದಲ್ಲಿ ಎರಡು ದಿವಸಗಳ ಜಾತ್ರೆ ನಡೆಯುತ್ತದೆ. ಭಾಲ್ಕಿಯ ಆಗ್ನೇಯಕ್ಕೆ 20 ಕಿಮೀ ದೂರದಲ್ಲಿರುವ ಬ್ಯಾಲ ಹಳ್ಳಿಯ ಬಳಿ ಕಾರಂಜಾ ನದಿಗೆ ಕಟ್ಟೆ ಕಟ್ಟಲಾಗುತ್ತಿದೆ. ಭಾಲ್ಕಿಯ ನೈಋತ್ಯಕ್ಕೆ 20 ಕಿಮೀ ದೂರದಲ್ಲಿ ಚಾಳಕಾಪುರವಿದೆ.
ರಾಮ ವನವಾಸದ ಕಾಲದಲ್ಲಿ ಇಲ್ಲಿಯೂ ತಂಗಿದ್ದನೆಂಬುದು ಐತಿಹ್ಯ. ಇಲ್ಲಿ ರಾಮಲಿಂಗೇಶ್ವರ, ಸೋಮಲಿಂಗೇಶ್ವರ ಮತ್ತು ರೇವಣಸಿದ್ಧೇಶ್ವರ ದೇವಾಲಯಗಳಿವೆ. ಅಮೃತಕುಂಡ. ಸೀತಾನಹಾನಿ ಕುಂಡ ಎಂಬ ಎರಡು ಕೊಳಗಳಿವೆ. ಹನುಮಂತ ಮತ್ತು ಚಾಳಕಮ್ಮರಿಗಾಗಿ ಊರು ಖ್ಯಾತಿ ಪಡೆದಿದೆ. ಚಾಳಕಮ್ಮನ ದೇವಾಲಯದಲ್ಲಿ ಭಿತ್ತಿಗಳ ಮೇಲೆ ಸಾಧುಸಂತರ ತೈಲಚಿತ್ರಗಳ್ನು ಬಿಡಿಸಲಾಗಿದೆ. ಅಲ್ಲಿ ಮೂಲ ಚಾಳಕಮ್ಮ ಮತ್ತು ಈಶ್ವರರ ಚಿಕ್ಕ ದೇವಾಲಯಗಳಿವೆ. ವರ್ಷಕ್ಕೆ ಎರಡು ಸಲ, ಅಕ್ಟೋಬರ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಚಾಳಕಮ್ಮನ ಜಾತ್ರೆ ನಡೆಯತ್ತದೆ. ಅಲ್ಲದೆ ವರ್ಷಕ್ಕೊಂದು ಸಲ, ಏಪ್ರಿಲ್ ತಿಂಗಳಿನಲ್ಲಿ, ಹನುಮಂತದೇವರ ಜಾತ್ರೆ ನಡೆಯುತ್ತದೆ. ಚಾಳಕಾಪುರದ ಹನುಮಾನ್ ಜಾಗ್ರತ ಪ್ರಾಣದೇವನೆಂದು ಪ್ರಸಿದ್ಧ. ಖಾನಾಪುರ ಇರುವುದು ಭಾಲ್ಕಿಯ ಆಗ್ನೇಯಕ್ಕೆ 26 ಕಿಮೀ ದೂರದಲ್ಲಿ. ಇಲ್ಲಿ ಮೈಲಾರೇಶ್ವರನ ಮಂದಿರವಿರುವುದರಿಂದ ಈ ಊರು ಮೈಲಾರವೆಂದು ಖ್ಯಾತಿ ಪಡೆದಿದೆ. ಚಾಳುಕ್ಯರಸ 2ನೆಯ ಜಗದೇಕಮಲ್ಲ ಪಟ್ಟಾಭಿಷಿಕ್ತನಾಗುವ ಸಮಯದಲ್ಲಿ ತನ್ನ ತಂದೆಯ ಹೆಸರಿನಲ್ಲಿ ಈ ದೇವಾಲಯಕ್ಕೆ ಭೂಮಿಗಳನ್ನು ದತ್ತಿಕೊಟ್ಟನೆಂದೂ ಈ ದೇವಾಲಯದ ಶಿಖರ ನಿರ್ಮಿಸಿದನೆಂದೂ ಈ ದೇವಾಲಯದ ಪೂರ್ವ ದ್ವಾರವನ್ನು ಅಹಲ್ಯಾಬಾಯಿ ಹೋಳ್ಕರ ಕಟ್ಟಿಸಿ ದೇವಾಲಯಕ್ಕೆ ಜಮೀನು ದಾನ ಮಾಡಿದಳೆಂದೂ ಹೇಳಲಾಗಿದೆ. ಇಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿ ವೇಳೆ ಜಾತ್ರೆ ನಡೆಯುತ್ತದೆ. ಖಟಕ ಚಿಂಚೋಳಿ ಎಂಬುದು ಭಾಲ್ಕಿಯ ನೈಋತ್ಯಕ್ಕೆ 24 ಕಿಮೀ ದೂರದಲ್ಲಿದೆ. ಇಲ್ಲಿಯ 13ನೆಯ ಶತಮಾನದ ಹುಲಕುಂಟೆ ಮಠ ಪ್ರಸಿದ್ಧವಾಗಿದೆ. ಇಲ್ಲಿ ಒಂದು ಪ್ರೌಢಶಾಲೆಯಿದೆ. ಪ್ರತಿವರ್ಷ ಆಗಸ್ಟ್‍ನಲ್ಲಿ ಜಾತ್ರೆ ನಡೆಯುತ್ತದೆ. ಸಂತ ಸಿದ್ಧರಾಜ ಮಾಣಿಕಪ್ರಭುವಿನ ಸಮಾಧಿಯಿದೆ. ಲಖನಗಾಂವ್ ಇರುವುದು ಭಾಲ್ಕಿಯ ಈಶಾನ್ಯಕ್ಕೆ 23 ಕಿಮೀ ದೂರದಲ್ಲಿ ಪ್ರತಿ ಏಪ್ರಿಲ್ ತಿಂಗಳಲ್ಲಿ ಇಲ್ಲಿ ಬಾರಾಸಿ ಎಂಬ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿ ಪ್ರೌಢಶಾಲೆಯಿದೆ. ತೂಗಾಂವ ಎಂಬುದು ಭಾಲ್ಕಿಯ ಆಗ್ನೇಯಕ್ಕೆ 31 ಕಿಮೀ ದೂರದಲ್ಲಿ ಕಾರಂಜಾ ನದಿಯ ದಂಡೆಯ ಮೇಲಿದೆ. ಇಲ್ಲಿಯ ಶಿವಲಿಂಗ ಪ್ರಸಿದ್ಧವಾದ್ದು. ಫಾಲ್ಗುಣ ಮಾಸದಲ್ಲಿ ಅನೇಕ ಭಕ್ತರು ಇಲ್ಲಿ ಸೇರಿ ಇದನ್ನು ಪೂಜಿಸುತ್ತಾರೆ. ಏಪ್ರಿಲ್‍ನಲ್ಲಿ ಇಲ್ಲಿಯ ವೀರ ಹನುಮಾನನ ಜಾತ್ರೆ ನಡೆಯುತ್ತದೆ. ತೂಗಾಂವ (ಹಾಲಸಿ) ಇರುವುದು ಭಾಲ್ಕಿಯ ವಾಯವ್ಯಕ್ಕೆ 31 ಕಿಮೀ ದೂರದಲ್ಲಿ. ಇಲ್ಲಿ ಲಕ್ಷ್ಮೀದೇವಿಯ ಮಂದಿರವಿದೆ. ಡಿಸೆಂಬರ್‍ನಲ್ಲಿ ಮೂರು ದಿವಸಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. 					
(ವಿ.ಕೆಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ